ತಾಮಸ್, ಸೇಂಟ್ - 
ಕ್ರೈಸ್ತಧರ್ಮಪ್ರಸಾರಕರಾದ ಹನ್ನೆರಡು ಜನರಲ್ಲಿ ಒಬ್ಬ. ಭಾರತಕ್ಕೆ ಬಂದ ಮತಪ್ರಚಾರಕರಲ್ಲಿ ಈತ ಮೊದಲಿಗನೆನ್ನಲಾಗಿದೆ. ಕ್ರೈಸ್ತಧರ್ಮ ಭಾರತದಲ್ಲಿ ಉದಯಿಸಿ, ಬೆಳೆದುದನ್ನು ನಿಖರವಾಗಿ ಹೇಳಲು ಬರುವಂತಿಲ್ಲ. ಇದರ ಹುಟ್ಟು, ಪ್ರಸಾರ ತಾಮಸನ ಸುತ್ತ ಹೆಣೆದ ಸುಂದರವಾದ ಕಥೆಯಾಗಿದೆ. ಈತನ ಕಾರ್ಯಕ್ಷೇತ್ರ ಮೆಸೊಪೊಟೇಮಿಯ, ಮಧ್ಯ ಏಷ್ಯ, ಚೀಣ, ಸಯಾಮ್, ಜರ್ಮನಿ, ಬ್ರಜಿಲ್ ಮತ್ತು ಇಥಿಯೊಪೀಯ ಮೊದಲಾದ ದೇಶಗಳೆನ್ನಲಾಗಿದೆ. ವಿನ್ಸೆಂeóÉೂೀ ಮರಿಯ ಈ ಮಾತನ್ನು ಪುಷ್ಟೀಕರಿಸಿದ್ದಾನೆ. ಈತ ಜಲಮಾರ್ಗದಿಂದ ಭಾರತಕ್ಕೆ ಬಂದು ಮಲಬಾರ್ ಮತ್ತು ಕೋರಮಂಡಲದ ತೀರದಲ್ಲಿ ಧರ್ಮೋಪದೇಶ ಮಾಡಿ ಅನೇಕ ಚರ್ಚುಗಳನ್ನು ಸ್ಥಾಪಿಸಿದನೆನ್ನಲಾಗಿದೆ. ಅನಂತರ ಈತ ಮದ್ರಾಸಿನ ಉಪನಗರವೆನಿಸಿದ ಮೈಲಾಪುರಕ್ಕೆ ಬಂದಾಗ ಅಲ್ಲಿ ಈತ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ತನ್ನ ಕಾರ್ಯನಿರ್ವಹಣೆಯ ಮಧ್ಯದಲ್ಲಿ ಅಲ್ಲಿಯೇ ಈತ ಪ್ರಾಣ ನೀಗಿದನೆಂದೂ ಈ ಘಟನೆ ಕ್ರಿ. ಶ 68 ರ ಡಿಸೆಂಬರ್ 21 ರಂದು ನಡೆಯಿತೆಂದೂ ಹೇಳಲಾಗಿದೆ. ಕ್ರಿ. ಶ.16-17 ನೆಯ ಶತಮಾನದ ಕ್ಯಾಥೋಲಿಕ್ ಪಂಡಿತರು ಈ ಸಂಗತಿಯನ್ನೇ ವಿಸ್ತರಿಸಿ ಬರೆದಿದ್ದಾರೆ. ಈ ಹುತಾತ್ಮನ ಸವಿನೆನಪಿಗಾಗಿ ಸೇಂಟ್ ತಾಮಸ್ ಮೌಂಟ್ ಚರ್ಚ್ ಅಲ್ಲಿ ಇಂದಿಗೂ ನಿಂತಿದೆ. ಕ್ರಿ.ಶ.1547 ರಲ್ಲಿ ಪೋರ್ಚುಗೀಸರು ಈತನ ಸ್ಮಾರಕ ಮಂದಿರವನ್ನು ಪುನಃ ಕಟ್ಟಿದ್ದರು.

ಈ ಸಂತನ ಬಗ್ಗೆ ನಂಬಲರ್ಹವಾದ ಕೆಲವು ಉಲ್ಲೇಖಗಳಿವೆ. ಗೊಂಡ ಪೊರಸನ (ಕ್ರಿ. ಪೂ. 1-ಕ್ರಿ.ಶ. .50 ) ಕೆಲವು ನಾಣ್ಯಗಳಿಂದ ಈ ಪ್ರವರ್ತಕ ಗಾಂದಹಾರರಾಜ ಗೊಂಡಫೊರಸ್‍ನನ್ನು ಕ್ರೈಸ್ತಮತಕ್ಕೆ ಪರಿವರ್ತಿಸಿದಂತೆ ತಿಳಿದು ಬರುತ್ತದೆ.

ಈತ ಭಾರತದಲ್ಲಿ ಧರ್ಮ ಪ್ರಸಾರ ಮಾಡಿದ ಕಾರ್ಯ ಮತ್ತು ಈತನ ಬಲಿದಾನವನ್ನು ತಾಮಸನ ಕಾರ್ಯಗಳು ಎಂಬ ಪುಸ್ತಕದಲ್ಲಿ ಬಣ್ಣಿಸಲಾಗಿದೆ. ಸಿರಿಯದಲ್ಲಿ ಬರೆಯಲ್ಪಟ್ಟ ಈ ಗ್ರಂಥ ಪ್ರಾಚೀನ ಸಾಹಿತ್ಯದಲ್ಲಿ ಒಂದು ಅಮರ ಕೃತಿಯಾಗಿದೆಯಾದರೂ ಇದರ ಐತಿಹಾಸಿಕ ಆಧಾರದ ಬಗ್ಗೆ ಅನೇಕರಿಗೆ ಸಂದೇಹ.							(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ